ಸ್ತನ್ಯಪಾನ ಮಹತ್ವ

 

” ಸ್ತನ್ಯಪಾನ-” ಬೇಕು-ಬೇಡಗಳು
——————————————–
1. ಸ್ತನ್ಯಪಾನದ ಪ್ರಯೋಜನಗಳ ಮಾಹಿತಿಯನ್ನು ಪಡೆದುಕೊಳ್ಳಿ.

2. ಸ್ತನ್ಯಪಾನವು ಸುಲಭ ವೆಂಬ ಪೂರ್ವಾಗ್ರಹವನ್ನು ತಳೆಯಬೇಡಿ. ಹೆರಿಗೆಗೆ ತಯಾರಾಗುವಂತೆ ಸ್ತನ್ಯಪಾನ ಮಾಡಿಸಲು ಕೂಡಾ ತಯಾರಾಗಿ. ಹೆರಿಗೆ ತಜ್ಞರು ,ದಾದಿಯರನ್ನು ಸಂಪರ್ಕಿಸಿ ವಿಚಾರಗಳನ್ನು ತಿಳಿದುಕೊಳ್ಳಿ.

3. ಜನಿಸಿದ ಮಗುವಿಗೆ ಎದೆ ಹಾಲು ಉಣಿಸುವುದು
ನಾವು ಊಹಿಸಿದಷ್ಟು ಸುಲಭವಲ್ಲ. ಅದನ್ನು ಸರಿಯಾಗಿ ನಿರ್ವಹಿಸಲು ಸಮಯ ಮತ್ತು ಮಾನಸಿಕವಾದ ಪೂರ್ವಸಿದ್ಧತೆ ಅತ್ಯಗತ್ಯ.

4. ಸ್ತನಗಳ ಉರಿಯೂತ ಅಥವಾ ಸೂಕ್ಷ್ಮಾಣು ಸೋಂಕು ಇದ್ದಾಗ, ಆಂಟಿಬಯೋಟಿಕ್ಸ್ ಬಳಸಿದಾಗ, ಉಪಕಾರಿ ಸೂಕ್ಷ್ಮಾಣುಗಳ ಸಮೂಹವನ್ನು ಒಳಗೊಂಡ ಪ್ರೊಬಯೋಟಿಕ್ಸ್ ಕ್ಯಾಪ್ಸೂಲ್ ಅಥವಾ ಪೌಡರ್ ಅನ್ನು ಸೇವಿಸಿ. ಅದು ಒಳಗೊಳ್ಳುವ ಸೂಕ್ಷ್ಮಾಣುಗಳ ಕೊರತೆಯನ್ನು ಭರ್ತಿ ಮಾಡುತ್ತದೆ. ಸ್ತನಗಳ ಉರಿಯೂತದ ಚಿಕಿತ್ಸೆಯಲ್ಲಿ ಕೂಡ ಪ್ರೋಬಯೋಟಿಕ್ಸ್ ಗಳ ಪಾತ್ರವಿದೆ.

5. ಹಾಲಿನ ಫಾರ್ಮುಲಾ ಗಳನ್ನು ಕೊಡುವುದು ಕೀಳು ಎಂಬ ಭಾವವನ್ನು ಕೂಡ ತಳೆಯಬೇಕಾಗಿಲ್ಲ. ಏಕೆಂದರೆ ಇಂದಿನ ಸಂದರ್ಭದಲ್ಲಿ ಅದೊಂದು ಸಾಮಾಜಿಕ ಅಗತ್ಯ. ಆದರೆ, ಅನಿವಾರ್ಯವಾಗಿ ಫಾರ್ಮುಲಾಗಳನ್ನು ಬಳಸುವುದಾದರೆ ಮಕ್ಕಳಿಗಾಗಿಯೇ ಇರುವ ಪ್ರೊಬಯೋಟಿಕ್ಸ್ ಗಳನ್ನು ಕೊಡುವುದು ಸೂಕ್ತ.

6. ಸಿಸೇರಿಯನ್ ಹೆರಿಗೆ ಬೇಕಾದಾಗ, ಹೆರಿಗೆಯ ನಂತರ ಸ್ತನ್ಯಪಾನ ಮಾಡಿಸುವುದನ್ನು ಉತ್ತೇಜಿಸುವ ಆಸ್ಪತ್ರೆಯನ್ನು ಆಯ್ದುಕೊಳ್ಳಿ. ಸಾಕಷ್ಟು ಮುಂಚೆಯೇ, ವೈದ್ಯರು ಮತ್ತು ದಾದಿಯರೊಂದಿಗೆ ಮಾತನಾಡಿಕೊಂಡು, ಸಿಸೇರಿಯನ್ ಹೆರಿಗೆಯ ನಂತರ ಕೂಡಲೇ ಸ್ತನ್ಯಪಾನ ಮಾಡಿಸುವ ನಿಮ್ಮ ನಿರ್ಧಾರವನ್ನು ತಿಳಿಸಿ. ಇದಕ್ಕೆ ಅವರೆಲ್ಲರ ಸಹಕಾರ ಅಗತ್ಯ.

7. ಹೆರಿಗೆಯ ಆರಂಭದ ಕೆಲವು ಗಂಟೆಗಳ ಕಾಲ, ತಾಯಿಯನ್ನು ಮಗುವಿನಿಂದ ಬೇರೆ ಇಡಬೇಕಾದ ಸಂದರ್ಭದಲ್ಲಿ, ಆಸ್ಪತ್ರೆಯಲ್ಲಿರುವ ಬ್ರೆಸ್ಟ್ ಪಂಪ್ ಉಪಕರಣಕ್ಕೆ ಬೇಡಿಕೆ ಇಡಿ. ಅದರ ಮೂಲಕ ಹೆರಿಗೆಯ ನಂತರದ ಮೊದಲ ಎದೆಹಾಲನ್ನು( ಕೊಲಸ್ಟ್ರಮ್ ) ಸಂಗ್ರಹಿಸಿ ಮಗುವಿಗೆ ನೀಡಬಹುದು.

8. ಬಾಣಂತನಕ್ಕೆ ಸಹಾಯಕಿಯರನ್ನು ನೇಮಿಸಿಕೊಳ್ಳುವುದು ಎಲ್ಲಾ ದೃಷ್ಟಿಯಿಂದಲೂ ಅನುಕೂಲ.

9. ಪ್ರತಿ ಎರಡು ಗಂಟೆಗೊಮ್ಮೆ ಸ್ತನ್ಯಪಾನ ಮಾಡಿಸಿ. ಇದು ಹಾಲಿನ ಉತ್ಪಾದನೆಯನ್ನು ಉತ್ತೇಜಿಸುವುದು. ಸ್ತನಗಳು ತೀರಾ ಊದಿಕೊಂಡು ಉಂಟಾಗುವ ಉರಿಯೂತವನ್ನು ತಡೆಗಟ್ಟುವುದು.

10. ಪಕ್ಕಕ್ಕೆ ಮಲಗಿಕೊಂಡು, ಮಗುವನ್ನು ಪಾರ್ಶ್ವದಲ್ಲಿ ಹಿಡಿದುಕೊಂಡು ಹಾಲುಣಿಸಿ. ಇದು ಸಿಸೇರಿಯನ್ ಸರ್ಜರಿಯಿಂದ ಗುಣಹೊಂದುತ್ತಿರುವ ಹೊಟ್ಟೆಯ ಭಾಗದಲ್ಲಿ ಅಧಿಕ ಒತ್ತಡ ಉಂಟಾಗುವುದನ್ನು ತಡೆಯುವುದು. ಅನಾನುಕೂಲವನ್ನು ನಿವಾರಿಸುವುದು.

11. ಆರಂಭದ ಹಲವು ತಿಂಗಳುಗಳ ಕಾಲ, ಬಾಟಲ್ ಫೀಡಿಂಗ್ ಮಾಡುವುದನ್ನು ತಪ್ಪಿಸಿ. ಇದು ನಿಪ್ಪಲ್ ಕನ್ಫ್ಯೂಷನ್- ಆಗುವುದನ್ನು ತಡೆಯುವುದು.

12. ಸ್ತನ್ಯಪಾನ ಮಾಡಿಸಲು ಅಪೇಕ್ಷೆ ಪಡಿ, ನಿರ್ಧಾರ ಮಾಡಿ. ಇದಕ್ಕೋಸ್ಕರ ನುರಿತವರ ಸಹಾಯ ಪಡೆಯಲು ಹಿಂಜರಿಯಬೇಡಿ. ಮಗುವಿಗೆ ಎದೆಹಾಲು ಉಣಿಸಲು ಯಾವ ತ್ಯಾಗಕ್ಕೂ ಸಿದ್ಧರಾಗಿ. ಏಕೆಂದರೆ ಇದು ಮಗುವಿನ ಭವಿಷ್ಯವನ್ನು ನಿರ್ಧರಿಸುವುದು.
ಇನ್ನೊಂದು ಕಾರಣವೆಂದರೆ, ಆ ಮಗುವಿಗೆ ಎದೆಹಾಲು ಉಳಿಸುವ ಸಂದರ್ಭವೂ, ಆ ಖುಷಿಯೂ ಮತ್ತೆ ಎಂದಿಗೂ ನಿಮ್ಮ ಜೀವನದಲ್ಲಿ ಸಿಕ್ಕಲಾರದು.

ಪೂರ್ವನಿರ್ಧಾರಿತ ವಾದ ಅಥವಾ ಹಠಾತ್ತನೆ ನಿರ್ಧರಿಸಲ್ಪಟ್ಟ ಸಿಸೇರಿಯನ್ ಹೆರಿಗೆಯು ಎದೆಹಾಲು ಉಣಿಸುವುದಕ್ಕೆ ಒಂದು ಬಹುದೊಡ್ಡ ಸವಾಲು. ಆತುರದಿಂದ ಅಥವಾ ಸುಲಭೋಪಾಯ ವೆಂದು ಪರಿಗಣಿಸಿ ಮಾಡುವ ಬಾಟಲ್ ಫೀಡಿಂಗ್ , ಮಗುವಿನಲ್ಲಿ ನಿಪ್ಪಲ್ ಕನ್ಫ್ಯೂಷನ್ ಎನ್ನುವ ಸ್ಥಿತಿಯನ್ನು ನಿರ್ಮಾಣ ಮಾಡುವುದು. ಅಂದರೆ ಮಗುವು ಎದೆಹಾಲನ್ನು ನಿರಾಕರಿಸಿ, ಬಾಟಲ್ ಹಾಲನ್ನು ಅಪೇಕ್ಷಿಸುವ ಒಂದು ಸ್ಥಿತಿ. ಏಕೆಂದರೆ ಮಗುವಿಗೆ ಎದೆಹಾಲು ಕುಡಿಯುವುದಕ್ಕಿಂತಲೂ ಬಾಟಲ್ ಹಾಲು ಕುಡಿಯುವುದು ಸುಲಭ . ಆದಕಾರಣ ಆಯ್ಕೆಯನ್ನು ಕೊಟ್ಟಾಗ ಬಹಳ ಮಂದಿ ಶಿಶುಗಳು ಬಾಟಲ್ ಹಾಲನ್ನು ಆಯ್ದುಕೊಳ್ಳುತ್ತವೆ., ಮಗುವಿನ ಆರೋಗ್ಯಕ್ಕೆ ಅದು ಪೂರಕವಲ್ಲದಿದ್ದರೂ ಕೂಡ.

ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು,

ಪ್ರಸಾದಿನೀ ಆಯುರ್ನಿಕೇತನ
ಪ್ರಸಾದ್ ಹೆಲ್ತ್ ಕೇರ್ ಸೆಂಟರ್
ನರಿಮೊಗರು,  ,ಪುತ್ತೂರು ದ.ಕ.

ಮೊಬೈಲ್.9740545979

consult@prasadini.com

prasadinicare@gmail.com.