ತಾಯಿಯ ಎದೆಹಾಲಿನ ಮಹತ್ವ

 

ತಾಯಿಯ ಎದೆಹಾಲಿನ ಮಹತ್ವ
——————————————-
ಹುಟ್ಟಿದ ಮಗು ಆರಂಭದ ಕೆಲವು ತಿಂಗಳು ಅತೀವ ಆರೈಕೆಯನ್ನು ಬಯಸುತ್ತದೆ. ಒಂದು ದನದ ಕರು ಜನಿಸಿದ ಕೆಲವೇ ಗಂಟೆಗಳ ಒಳಗೆ ತನ್ನ ಕಾಲ ಮೇಲೆ ನಿಂತು ಹೆಜ್ಜೆ ಇಡುವುದಕ್ಕೆ ಆರಂಭಿಸುತ್ತದೆ. ಆದರೆ ಮನುಷ್ಯರಲ್ಲಿ ಹಾಲಿಗಿಂತ ಬೇರೆ ಆಹಾರಗಳನ್ನು ಸೇವಿಸಲು 5 ರಿಂದ 12 ತಿಂಗಳು ಬೇಕಾಗುತ್ತದೆ. ಮಗುವಿಗೆ ನಿರಂತರ ಪೋಷಣೆ ಮತ್ತು ವಿಶ್ರಾಂತಿಯ ಅಗತ್ಯವಿದೆ. ಆದಕಾರಣ ಪ್ರತಿ ಎರಡು , 4 ಗಂಟೆಗಳಿಗೊಮ್ಮೆ ಆಹಾರ ಮತ್ತು ಹೆಚ್ಚು ನಿದ್ರೆ ಬಯಸುತ್ತದೆ. ಈ ಅವಧಿಯಲ್ಲಿ ಮಗುವಿನ ಕರುಳು ಸರಿಯಾಗಿ ಬೆಳೆಯಬೇಕು ಮತ್ತು ಕರುಳು ಟ್ರಿಲಿಯನ್ ಗಟ್ಟಲೆ ಸೂಕ್ಷ್ಮಾಣುಗಳ ಸಮೂಹವನ್ನು ತಾಳಿ ಕೊಳ್ಳುವುದಕ್ಕೆ ಸಮರ್ಥ ವಾಗಬೇಕು.
ಆದರೆ ದೇಹದ ಒಳಗಿನ ಅಂಗಗಳಾದ ಹೃದಯ ಕಿಡ್ನಿ ಮುಂತಾದ ಅಂಗಗಳು ಸೂಕ್ಷ್ಮಾಣು ಗಳಿಂದ ಸುತ್ತು ವರೆದಿರುವುದರಿಂದ ಪ್ರಯೋಜನ ಇರುವುದಿಲ್ಲ. ಹಾಗೇನಾದರೂ ಆದರೆ ಆಗ ಶರೀರದ ರೋಗ ನಿರೋಧಕ ವ್ಯವಸ್ಥೆಯು ಪ್ರತಿಕ್ರಿಯಿಸುತ್ತದೆ.

ಎಲ್ಲಾ ರೀತಿಯ ಆಹಾರ ಸೇವನೆಗೆ ಸಿದ್ಧವಾಗಲು ಕರುಳಿಗೆ ನಾಲ್ಕರಿಂದ ಆರು ತಿಂಗಳು ಬೇಕು. ಆ ಅವಧಿಯಲ್ಲಿ ಮಗುವಿಗೆ ಸರ್ವಾಂಗೀಣ ಆಧಾರ ಯಾವುದೆಂದರೆ ತಾಯಿಯ ಎದೆಹಾಲು. ಅದು ಸಾವಿರಾರು ವರುಷಗಳಿಂದ ಇರುವ ಪ್ರಕೃತಿಯ ಕೊಡುಗೆ.
ಒಂದು ಮಗುವಿಗೆ ನಾಲ್ಕರಿಂದ ಆರು ತಿಂಗಳು ಎದೆಹಾಲು ಮಾತ್ರ ನಿಜವಾದ ಆಹಾರ. ನಂತರ ಎರಡು ವರ್ಷದ ತನಕ ಹಾಲು ಮತ್ತು ಘನ ಆಹಾರ ಕೊಡಬಹುದು. ಎದೆಹಾಲಿನಲ್ಲಿರುವ ಪೋಷಕಾಂಶಗಳು ಪ್ರೋಟೀನ್ 10 ಶೇಕಡ, ಕೊಬ್ಬು 30 ಶೇಖಡಾ, ಶರ್ಕರಪಿಷ್ಟ 60 ಶೇಕಡ, ಮತ್ತು ಮಿಕ್ಕುಳಿದ ಜೀವಸತ್ವಗಳು ಮತ್ತು ಲವಣಗಳು.
ಆದರೆ ಇದಿಷ್ಟೇ ಆಗಿದ್ದರೆ ತಾಯಿಯ ಎದೆ ಹಾಲಿಗೆ ಅಷ್ಟು ಮಹತ್ವ ಬರುತ್ತಿರಲಿಲ್ಲ. ಏಕೆಂದರೆ ಇವುಗಳು ಇತರ ಆಹಾರ ಗಳಲ್ಲೂ ಇವೆ. ಇದಕ್ಕಿಂತ ಮಿಗಿಲಾಗಿ, ಇನ್ನೂ ಹಲವು ಅಮೂಲ್ಯ ಅಂಶಗಳು ಎದೆಹಾಲಿನಲ್ಲಿ ಇವೆ.
1. ತಾಯಿಯಲ್ಲಿನ ಆಂಟಿಬಾಡಿ ( ಪ್ರತಿಕಾಯಗಳು), ಅಂದರೆ ರೋಗಾಣುಗಳ ವಿರುದ್ಧ ಹೋರಾಡುವ ಸೈನಿಕರು.
2. ಲ್ಯಾಕ್ಟೋಫೆರಿನ್,- ಇದು ಕಬ್ಬಿಣದ ಸತ್ವವನ್ನು ಹಿಡಿದಿಡುವ ಪ್ರೋಟೀನ್. ಇದು ಕಬ್ಬಿಣವನ್ನು ಬಯಸುವ ರೋಗಾಣು ಬ್ಯಾಕ್ಟೀರಿಯಾಗಳಿಂದ ಅದನ್ನು ಸೆಳೆದುಕೊಂಡು , ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತ ಗೊಳಿಸುವುದು.
3. ಲೈಸೋಜೈಮ್ – ಆಹಾರದ ಜೀರ್ಣ ಕ್ರಿಯೆಗೆ ಅಗತ್ಯವಾದ ಕಿಣ್ವ.
4. ಗ್ರೌತ್ ಫ್ಯಾಕ್ಟರ್ಸ್- ರೋಗನಿರೋಧಕ ಶಕ್ತಿ ಹಾಗೂ ದೇಹದ ಬೆಳವಣಿಗೆಗೆ ಕಾರಣವಾದ ಅಂಶಗಳು.
5. ಒಲಿಗೋಸಾಕ್ಕರೈಡ್ಸ್ – ಇದು ಹತ್ತು ಶೇಕಡಾದಷ್ಟು ಜೀರ್ಣವಾಗದೆ ಮಗುವಿನ ಕರುಳಿನಲ್ಲಿ ಹಾದುಹೋಗುತ್ತದೆ. ಮಗುವಿನ ದೊಡ್ಡಕರುಳಿನಲ್ಲಿನ ಬ್ಯಾಕ್ಟೀರಿಯಾಗಳಿಂದ ಮಾತ್ರ ಜೀರ್ಣಿಸಲ್ಪಡುತ್ತದೆ.
ಇದರಿಂದ,
ತಾಯಿಯು ಮಗುವನ್ನು ಮಾತ್ರವಲ್ಲ ಕರುಳಿನಲ್ಲಿ ನ ಬ್ಯಾಕ್ಟೀರಿಯಾಗಳಿಗೂ ಪೋಷಕಳು ಎಂಬ ಅಂಶ ಅರಿವಿಗೆ ಬರುತ್ತದೆ.
ಅಷ್ಟೇ ಅಲ್ಲದೆ, ಮಗುವಿಗೆ ಬ್ಯಾಕ್ಟೀರಿಯಾಗಳಿಂದ ಬಹಳಷ್ಟು ಅನುಕೂಲಗಳು ಉಂಟಾಗುತ್ತದೆ.
1.” ಬೈಫಿಡೋ ” ಜಾತಿಯ ಬ್ಯಾಕ್ಟೀರಿಯಾಗಳು ಹಾಲಿನಲ್ಲಿರುವ ಗ್ರೌತ್ ಫ್ಯಾಕ್ಟರ್, ಇದರ ಪರಿಣಾಮವನ್ನು ಹೆಚ್ಚಿಸುತ್ತದೆ. ಇದರಿಂದ ರೋಗನಿರೋಧಕ ವ್ಯವಸ್ಥೆ ಶಾಶ್ವತವಾಗುತ್ತದೆ. ಉರಿಯೂತದ ಪ್ರಕ್ರಿಯೆಯನ್ನು ಕರುಳಿನಲ್ಲಿ ಕಡಿಮೆ ಮಾಡುತ್ತದೆ.
2. ” ಬೈಫಿಡೋ ಬ್ಯಾಕ್ಟೀರಿಯಂ ಬ್ರೆವಿ” ಜಾತಿಯ ಬ್ಯಾಕ್ಟೀರಿಯಾಗಳನ್ನು ಸೇವಿಸಿದಂತಹ,ಅವಧಿಗೆ ಮುನ್ನ ಜನಿಸಿದ ಮಕ್ಕಳಲ್ಲಿ ಗ್ರೌತ್ ಫ್ಯಾಕ್ಟರ್ ಪರಿಣಾಮವನ್ನು ಹೆಚ್ಚಿಸಿದ್ದು ಕಂಡುಬಂತು.

ಎದೆಹಾಲು ಎನ್ನುವಂತದ್ದು, ತನ್ನದೇ ಆದ ಸೂಕ್ಷ್ಮಾಣು ಸಮೂಹವನ್ನು ( ಮೈಕ್ರೋ ಬಯೋಟ) ಒಳಗೊಂಡು ಬರುವಂತದ್ದು. ಮಗುವಿಗೆ ತಾಯಿಯು ಎದೆ ಹಾಲನ್ನು ಉಣಿಸುವ ಸಂದರ್ಭದಲ್ಲಿ ತಾಯಿಗೆ ಚರ್ಮದಿಂದ ಹಲವಾರು ಸೂಕ್ಷ್ಮಾಣುಗಳು ಮಗುವಿನ ಹೊಟ್ಟೆ ಸೇರುತ್ತದೆ. ಅಂದರೆ, ಹಾಲು ಸೇವಿಸುವ ಪ್ರಕ್ರಿಯೆಯ ಜೊತೆಗೆ ಹಾಲಿನ ಮೂಲಕವೇ ಇದು ಆಗುತ್ತದೆ. ಎದೆಹಾಲು ಸೂಕ್ಷ್ಮಾಣು ಗಳಿಂದ ಸೋಂಕಿತ ವಾಗಿದೆ ಎನ್ನುತ್ತಿದ್ದ ವಿಜ್ಞಾನಿಗಳಿಗೆ ಈಗ ಆಘಾತ ಕಾದಿದೆ!!
ಕಾರಣಗಳು ಅನೇಕ.
ಗರ್ಭಿಣಿ ಇಲಿಗಳಿಗೆ ಮೂಲಕ ಲ್ಯಾಕ್ಟೋ ಬ್ಯಾಸಿಲಸ್ ಬ್ಯಾಕ್ಟೀರಿಯಾಗಳನ್ನು ಉಣಿಸಲಾಯಿತು. ಅದೇ ಬ್ಯಾಕ್ಟೀರಿಯಾಗಳು ಇಲಿಗಳ ಎದೆಹಾಲಿನಲ್ಲಿ, ಮರಿ ಇಲಿಗಳ ಕರುಳಿನಲ್ಲೂ ಕಂಡುಬಂದವು. ಇದು ಪ್ರಯೋಗದ ಮೂಲಕ ಕಾಂಪ್ಲೂಟೆನ್ಸ್ ಯೂನಿವರ್ಸಿಟಿ ಆಫ್ ಮ್ಯಾಡ್ರಿಡ್ ಇಲ್ಲಿನ ಸಂಶೋಧಕ ವಿಜ್ಞಾನಿಗಳು ಕಂಡುಕೊಂಡ ಸತ್ಯ.
“ಡಾ ಮ್ಯಾಕ್ ಗೈರಿಸ್ ಲ್ಯಾಬ್ ಅಟ್ ದಿ ಯುನಿವರ್ಸಿಟಿ ಆಫ್ ಇಡಾಹೋ ” ಇದರ ವರದಿಯ ಪ್ರಕಾರ ,ಒಂದು ಸಲ ಎದೆಹಾಲು ಉಣಿಸಿ ದಾಗ ಒಂದು ಲಕ್ಷದಷ್ಟು ಬ್ಯಾಕ್ಟೀರಿಯಾಗಳು ಮಗುವಿನ ಹೊಟ್ಟೆ ಸೇರುತ್ತದೆ. ಎದೆಹಾಲು ಎಂಬುದು ಪೋಷಕಾಂಶಗಳ ಜೊತೆಗೆ ನಾನಾ ಬಗೆಯ ಬ್ಯಾಕ್ಟೀರಿಯಾಗಳನ್ನು ಕೂಡ ಮಗುವಿನ ಹೊಟ್ಟೆಗೆ ಸೇರಿಸುತ್ತದೆ. ಹೆರಿಗೆಯ ನಂತರದ ಮೊದಲ ಎದೆಹಾಲು “ಕೊಲೋಸ್ಟ್ರಮ್ ” ಎಂದು ಕರೆಯಲ್ಪಡುತ್ತದೆ. ಪ್ರತಿಸಲ ಮಗುವಿಗೆ ಎದೆ ಹಾಲು ನೀಡುವ ಪ್ರಕ್ರಿಯೆಯು ,ಮಗುವಿಗೆ ಶಕ್ತಿ ನೀಡುವ ಜತೆಗೆ, ಬಾಯಿತುಂಬಾ ಉಪಕಾರಕವಾದ ಬ್ಯಾಕ್ಟೀರಿಯಾಗಳನ್ನು ಕೂಡ ಮಗುವಿಗೆ ಕೊಡುಗೆಯಾಗಿ ನೀಡುತ್ತದೆ. ಅಷ್ಟೇ ಅಲ್ಲ, ಮಗುವಿನ ಹೊಟ್ಟೆ ಸೇರಿದ ಬ್ಯಾಕ್ಟೀರಿಯಾಗಳಿಗೆ ಪೋಷಣೆ ಒದಗಿಸುವ ಸರಿಯಾದ ಆಹಾರವನ್ನು ಕೂಡ ಎದೆಹಾಲು ನೀಡುತ್ತದೆ.
ಮಕ್ಕಳಿಗೆ ಇಂದು ಎದೆ ಹಾಲಿನ ಬದಲಿಗೆ ಹಾಲಿನ ಫಾರ್ಮುಲಾಗಳನ್ನು ನೀಡುವ ಒಂದು ಫ್ಯಾಶನ್ ಪ್ರಚಲಿತದಲ್ಲಿದೆ. ಆದರೆ ಸಮಾಜದಲ್ಲಿ ಪರಿವರ್ತನೆ ಆಗುವತನಕ, ಪ್ರತಿಯೊಂದು ಮಗುವಿಗೂ ಎದೆಹಾಲು ನೀಡುವ ಪ್ರಜ್ಞಾವಂತಿಕೆ ತಾಯಂದಿರಲ್ಲಿ ಮೊಳೆಯುವ ತನಕ, ಈ ಹಾಲಿನ ಫಾರ್ಮುಲಾಗಳನ್ನು ಎದೆ ಹಾಲಿಗೆ ಹತ್ತಿರವಾಗಿ ತಯಾರು ಮಾಡುವಂತೆ ನೋಡಿಕೊಳ್ಳಬೇಕು. ಆ ಕುರಿತು ವಿಜ್ಞಾನ ದೃಷ್ಟಿ ಹಾಯಿಸಲಿ. ಬೇಬಿ ಫಾರ್ಮುಲಾ ತಂತ್ರಜ್ಞಾನವು ಎದೆ ಹಾಲಿಗೆ ಸಮಾನವಾಗದಿದ್ದರೂ, ಉಪಕಾರಕ ಸೂಕ್ಷ್ಮಾಣುಗಳನ್ನು ( ಪ್ರೊಬಯೋಟಿಕ್ಸ್) ಸೇರಿಸುವುದರ ಮೂಲಕ ಮೌಲ್ಯವರ್ಧನೆ ಮಾಡಬಹುದು.
ಅಧ್ಯಯನಗಳು ತಿಳಿಸುವ ಪ್ರಕಾರ, ಬೇಬಿ ಫಾರ್ಮುಲಾ ಕೊಟ್ಟ ಮಕ್ಕಳ ಕರುಳಿನಲ್ಲಿನ ಉಪಕಾರಕ ಸೂಕ್ಷ್ಮಾಣುಗಳ ಪದರವು ಎದೆಹಾಲು ಕೊಟ್ಟ ಮಕ್ಕಳದ್ದಕ್ಕಿಂತ ತೀರಾ ಭಿನ್ನವಾಗಿರುವುದು ಕಂಡುಬಂದಿದೆ. ಎದೆ ಹಾಲು ಕೊಟ್ಟ ಮಕ್ಕಳಲ್ಲಿ ತುಂಬಾ ಶಕ್ತಿಶಾಲಿಯಾಗಿದೆ. ಫಾರ್ಮುಲಾ ಗಳಲ್ಲಿ ದನದ ಹಾಲಿನಿಂದ ತಯಾರಿಸಿದ ಒಲಿಗೋಸಾಕ್ಕರೈಡ್ಸ್ ಇರುವುದು. ಇದರಿಂದಾಗಿ ಕರುಳಿನಲ್ಲಿ ನ ಉಪಕಾರಕ ಸೂಕ್ಷ್ಮಾಣು ಗಳಿಗೆ ಲಭ್ಯವಾಗುವ ಆಹಾರದಲ್ಲೂ ಅಂತರವುಂಟಾಗುತ್ತದೆ.
ಕೃತಕವಾದ ಫಾರ್ಮುಲಾ ಹಾಲನ್ನು ಕೊಟ್ಟ, ಪುಟ್ಟ ಮಕ್ಕಳಲ್ಲಿ ಸಾಂಕ್ರಾಮಿಕ ರೋಗಗಳು, ಬೊಜ್ಜು, ಅಸ್ತಮಾ ರೋಗಗಳು ಬರುವ ಸಾಧ್ಯತೆ ತುಂಬಾ ಅಧಿಕವಾಗಿರುತ್ತದೆ. ಪ್ರೊಬಯೊಟಿಕ್ಸ್ ಸೇರ್ಪಡೆಗೊಂಡ ಫಾರ್ಮುಲಾ ಹಾಲನ್ನು ಸೇವಿಸಿದಂತಹ ಮಕ್ಕಳಲ್ಲಿ , ಎದೆಹಾಲು ಉಣಿಸಿದ ಮಕ್ಕಳಲ್ಲಿ ಇರುವಂತೆಯೇ, ಕರುಳಿನ ನೆರವು ನೀಡುವ ಸೂಕ್ಷ್ಮಾಣು ಪದರವು ಸದೃಢ ವಾಗಿರುವುದು ಕಂಡುಬಂದಿದೆ.
ಆದುದರಿಂದ, ಎದೆಹಾಲು, ಎದೆ ಹಾಲು ಉಣಿಸುವ ಪ್ರಕ್ರಿಯೆ, ಹಾಗೂ ಅವುಗಳ ಜೊತೆಗೆ ಹೊಟ್ಟೆ ಸೇರುವ ಬ್ಯಾಕ್ಟೀರಿಯಾಗಳು- ಪ್ರತಿಯೊಂದು ಕೂಡ
ಮಗುವಿನ ಭವಿಷ್ಯದ ಆರೋಗ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ನಾವೆಲ್ಲ ಗಮನಿಸಿ, ಜಾರಿಗೆ ತರಬೇಕಾದ ಅಂಶ.

ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು,ಪ್ರಸಾದಿನೀ ಆಯುರ್ನಿಕೇತನ ,
ಪ್ರಸಾದ್ ಹೆಲ್ತ್ ಕೇರ್ ಸೆಂಟರ್
ನರಿಮೊಗರು,

ಪುತ್ತೂರು.

ಮೊಬೈಲ್:9740545979

consult@prasadini.com

prasadinicare@gmail.com.